ವಿದ್ಯಾಪತಿ
	1360-1450. ಭಾರತೀಯ ಕವಿ. ಪ್ರಕಾಂಡ ಪಂಡಿತ. ಸಂಸ್ಕøತ, ಅಪಭ್ರಂಶ ಹಾಗೂ ಮೈಥಿಲೀ ಭಾಷೆಗಳಲ್ಲಿ ಗ್ರಂಥಗಳನ್ನು ರಚಿಸಿದವ. ಮೈಥಿಲೀ ಭಾಷೆ ಮಾಗಧಿ ಪ್ರಾಕೃತದಿಂದ ಆದದ್ದು. ಬಂಗಾಲಿ ಹಾಗೂ ಹಿಂದಿಗಳ ಮಧ್ಯದ ಭಾಷೆ. ಎರಡೂ ಭಾಷೆಗಳ ಲಕ್ಷಣಗಳೂ ಇದರಲ್ಲಿ ಇವೆ. ಹೀಗಾಗಿ ಎರಡೂ ಭಾಷೆಗಳ ಜನರು ವಿದ್ಯಾಪತಿ ತಮ್ಮವನೆಂದು ಹೇಳಿಕೊಳ್ಳುತ್ತಾರೆ. ಇದು ಕವಿಯ ಶ್ರೇಷ್ಠತೆಯ ಕುರುಹು. 

	ಜಯದೇವ ಸಂಸ್ಕøತದಲ್ಲಿ ರಾಧಾಕೃಷ್ಣರ ಪ್ರೇಮದ ಪ್ರವಾಹವನ್ನು ಹರಿಸಿದರೆ ಈತ ಕೃಷ್ಣನ ಪ್ರೇಮದ ಕೊಳಲನ್ನು ಮಿಥಿಲೆಯ ಮಾಮರಗಳಲ್ಲಿ ಮೊಳಗಿಸಿದ್ದಾನೆ. ಮಹಾರಾಜ ಶಿವಸಿಂಹ ಈತನನ್ನು ಅಭಿನವ ಜಯದೇವ ಎಂದು ಕರೆದಿದ್ದಾನೆ. ಜೊತೆಗೆ ಮೈಥಿಲಿ ಕೋಕಿಲ ಎಂಬ ಬಿರುದೂ ಇವನಿಗೆ ಇದೆ. 

	ಇವನ ಕಾಲ ವಿವಾದಾಸ್ಪದವಾದುದು. ಈತ ಕೆಲವು ರಾಜರ ಆಸ್ಥಾನದಲ್ಲಿದ್ದ. ಆ ರಾಜರ ಕಾಲವನ್ನು ಗಮನಿಸಿ ಈತ 1360ರಲ್ಲಿ ಜನಿಸಿರಬೇಕು ಎನ್ನಲಾಗಿದೆ. ಮಿಥಿಲೆಯ ದರ್ಭಾಂಗ ಜಿಲ್ಲೆಯ ವಿಸಪಿ ಅಥವಾ ಗಡವಿಸಪಿ ಈತನ ನಿವಾಸ ಸ್ಥಾನ. ತಂದೆ ಗಣಪತಿ ಠಾಕೂರ ಸಂಸ್ಕøತ ಪಂಡಿತ. ತಾಯಿ ಹಂಸಿನೀದೇವಿ. ಬಹುಕಾಲ ಮಕ್ಕಳಿಲ್ಲದೆ ಕಪಿಲೇಶ್ವರನ ಸೇವೆಮಾಡಿ ಇವನನ್ನು ಪಡೆದಳು. ತಂದೆ ಮತ್ತು ಹರಿಮಿಶ್ರ ಎಂಬವರ ಬಳಿ ಸಂಸ್ಕøತ ಕಲಿತ. ಇವರದು ಶ್ರೀಮಂತ ಮನೆತನ. ಇವನ ಮಗ ಹರಪತಿ. ಮಗಳು ದುಲಹೀ, ಸೊಸೆ ಚಂದ್ರಕಲಾ. ಈಕೆ ದೊಡ್ಡ ಕವಯಿತ್ರಿ. ಇವಳ ಕವಿತೆಗಳನ್ನು ದರ್ಭಾಂಗದ ರಾಜಕವಿ ಲೋಚನ ಸಂಗ್ರಹಿಸಿದ. ಇದು ರಾಜತರಂಗಿಣಿಯಲ್ಲಿದೆ. 

	ಇವನ ಕೊನೆಗಾಲವನ್ನು ಕುರಿತಂತೆ ಎರಡು ದಂತಕಥೆಗಳಿವೆ: ಇವನ ಕಾವ್ಯಮಾಧುರ್ಯಕ್ಕೆ ಮಾರುಹೋಗಿ ಸಾಕ್ಷಾತ್ ಶಿವನೇ ಈತನ ಮನೆಯಲ್ಲಿ ಉಗನಾ ಎಂಬ ಹೆಸರಿನ ಆಳಾಗಿ ದುಡಿಯುತ್ತಿದ್ದನಂತೆ. ಒಮ್ಮೆ ಇವನಿಗೆ ಬಾಯಾರಿಕೆಯಾದಾಗ ಆಳು ಗಂಗಾ ಜಲವನ್ನು ತಂದ. ಆಗ ಉಗನಾ ಶಿವನೆಂದು ಇವನಿಗೆ ತಿಳಿಯಿತು.  ಆತ ಶಿವನೆಂಬ ಪರಿವೆಯಿಲ್ಲದೇ ಒಂದು ದಿನ ಇವನ ಹೆಂಡತಿ ಉಗನಾನನ್ನು ಹೊಡೆದಾಗ ಈತ ಸಾಕ್ಷಾತ್ ಶಿವನನ್ನು ಹೊಡೆಯುತ್ತಿದ್ದೀಯ ಎಂದು ಕೂಗಿಕೊಂಡ. ಆಗ ಶಿವ ಅಲ್ಲೇ ಬಯಲಾದ. ಈತ ಶಿವನ ವಿರಹದಲ್ಲಿ ಹುಚ್ಚನಾದ. ಉಗನಾ, ಮರಳಿ ಬಾ ಎಂದು ಪರಿಪರಿಯಾಗಿ ಪ್ರಲಾಪಿಸಿದ. ಮತ್ತೊಂದು ದಂತಕತೆಯ ಪ್ರಕಾರ ಇವನಿಗೆ ಗಂಗಾತೀರದ ಬಳಿ ತನ್ನ ಕೊನೆಯುಸಿರು ಎಳೆಯಬೇಕೆಂಬ ಆಸೆ. ಪಲ್ಲಕ್ಕಿಯಲ್ಲಿ ಕುಳಿತು ವಿಸಪಿ ಯಿಂದ ಹೊರಟು ಮೂರನೆಯ ದಿನ ಮವೂ ಬಾಜಿತಪುರ ತಲುಪಿದ. ಕವಿ ಅಲ್ಲಿಗೆ ತನ್ನ ಯಾತ್ರೆ ನಿಲ್ಲಿಸಿ ನಾನು ತಾಯಿ ಗಂಗೆಯ ದರ್ಶನಕ್ಕಾಗಿ ಇಷ್ಟು ದೂರ ಬಂದೆ, ಆ ತಾಯಿ ತನ್ನ ಮಗನಿಗಾಗಿ ಎರಡು ಹರದಾರಿ ಬರಲಾರಳೇ ಎಂದ. ರಾತ್ರಿ ಕಳೆದು ಬೆಳಗಾದಾಗ ಗಂಗೆ ತನ್ನ ದಿಕ್ಕನ್ನೇ ಬದಲಾಯಿಸಿ ಎರಡು ಹರದಾರಿ ಮುಂದಕ್ಕೆ ಬಂದಿತ್ತು. ಜನರಿಗಂತೂ ಅಚ್ಚರಿ. ಅಲ್ಲಿ ಗಂಗೆಯ ಪವಿತ್ರ ಸಾನ್ನಿಧ್ಯದಲ್ಲಿ ಈತ ದೇಹತ್ಯಾಗಮಾಡಿದ. ಗಂಗಾನದಿ ಇಂದಿಗೂ ಅಲ್ಲಿ ಡೊಂಕಾಗಿ ಹರಿಯುತ್ತಿದೆ. ಈತನ ದೇಹ ತ್ಯಾಗ ಸ್ಥಳದಲ್ಲಿ ಒಂದು ಶಿವಾಲಯವನ್ನು ನಿರ್ಮಿಸಲಾಗಿದೆ. ಇದು ಇಂದಿಗೂ ಈತನ ಸ್ಮಾರಕವಾಗಿ ಭಾವುಕರನ್ನು ಆಕರ್ಷಿಸುತ್ತಿದೆ. 

	ಈತನ ಮತ್ತು ಮಹಾರಾಜ ಶಿವಸಿಂಹರ ಸಂಬಂಧ ಪಂಪ ಅರಿಕೇಸರಿಯ ಸಂಬಂಧವನ್ನು ನೆನಪಿಗೆ ತರುತ್ತದೆ. ಕೀರ್ತಿಸಿಂಹನ ಕಾಲಕ್ಕೆ ಈತ ಖೇಲನಕವಿ ಯಾಗಿದ್ದರೆ ಶಿವಸಿಂಹನ ಕಾಲಕ್ಕೆ ಅವನ ಸಖಾಕವಿಯಾಗಿದ್ದ. ಶಿವಸಿಂಹ ಮತ್ತು ಅವನ ರಾಣಿಯರೆದುರಿಗೆ ಅವರ ಅಂತಃಪುರದಲ್ಲಿ ಪ್ರೇಮಗೀತೆ ರಚಿಸಿ ಈತ ಹಾಡುತ್ತಿದ್ದ. 

	ಇವನ ಕೃತಿಗಳು ಸಂಸ್ಕøತ, ಅಪಭ್ರಂಶ ಮತ್ತು ಮೈಥಿಲೀ ಭಾಷೆಗಳಲ್ಲಿವೆ. ಭಾಷೆಯ ದೃಷ್ಟಿಯಿಂದ ಈತನ ಕೃತಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಬಹುದು. 

	1. ಸಂಸ್ಕøತ : ಭೂಪರಿಕ್ರಮಣ-ಇದು ಕವಿಯ ಚೊಚ್ಚಲ ಕೃತಿ; ಬಲರಾಮ ಶಾಪಕ್ಕೆ ತುತ್ತಾಗಿ ತೀರ್ಥಯಾತ್ರೆಗೆ ಹೊರಟ ಕಥೆ. ಪುರುಷ ಪರೀಕ್ಷಾ-ನೀತಿಗ್ರಂಥ. ಕಥೆಗಳ ಮೂಲಕ ಧರ್ಮ, ರಾಜನೀತಿಗಳನ್ನು ಹೇಳಿದೆ. ಲೇಖನಾವಲಿ-ಇದನ್ನು ಬನೌಲಿಯ ರಾಜ ಪರಾದಿತ್ಯನ ಕೋರಿಕೆಯ ಮೇರೆಗೆ ಬರೆದುದು. ಶೈವಸರ್ವಸ್ವಸಾರ-ಮಹಾರಾಜ ಪದ್ಮಸಿಂಹನ ಪತ್ನಿ ವಿಶ್ವಾಸದೇವಿಯ ಕೋರಿಕೆಯ ಮೇರೆಗೆ ಬರೆದುದು; ಇದೊಂದು ಪ್ರಮಾಣಭೂತ ಪುರಾಣಸಂಗ್ರಹ. ಗಂಗಾವಾಕ್ಯಾವಳಿ-ಇದು ವಿಶ್ವಾಸದೇವಿಗಾಗಿ ರಚಿಸಿದ ಗ್ರಂಥ; ವಿಭಾಗಸಾರ- ನರಸಿಂಹದೇವನಿಗಾಗಿ ರಚಿತವಾದ ಗ್ರಂಥ; ದಾಯಭಾಗದ ವರ್ಣನೆಯಿದೆ. ದಾನವಾಕ್ಯಾವಲಿ- ನರಸಿಂಹದೇವನ ಪತ್ನಿ  ಧೀರಮತಿಗಾಗಿ ರಚಿಸಿದ ಗ್ರಂಥ; ಎಲ್ಲ ಬಗೆಯ ದಾನಗಳನ್ನು ಹೇಳಿದೆ. ದುರ್ಗಾಭಕ್ತಿ ತರಂಗಿಣಿ-ಮಹಾರಾಜ ಭೈರವಸಿಂಹನಿಗಾಗಿ ಬರೆದ ಗ್ರಂಥ; ಗಯಾಪತ್ತಲಕ,  ವರ್ಷಕೃತ್ಯ ಹಾಗೂ ಮಣಿಮಂಜರೀ-ನಾಟಕ. 

	2. ಅಪಭ್ರಂಶ : ಕೀರ್ತಿಲತಾ-ಮಹಾರಾಜ ಕೀರ್ತಿಸಿಂಹನ ಯಶೋಗಾನ ಮಾಡುವ ಈ ಚಂಪೂಕಾವ್ಯ ಭೃಂಗ-ಭೃಂಗೀಸಂವಾದ ಶೈಲಿಯಲ್ಲಿ ರಚಿಸಲ್ಪಟ್ಟಿದೆ. ಕೀರ್ತಿಪತಾಕಾ-ಇದು ಮಹಾರಾಜ ಶಿವಸಿಂಹನ ಕೀರ್ತಿಯ ವರ್ಣನಾಗ್ರಂಥ. 

	3. ಮೈಥಿಲೀ : ಗೋರಕ್ಷವಿಜಯ : ಇದು ನಾಲ್ಕು ಅಂಕಗಳ ನಾಟಕ. ಇದರಲ್ಲಿಯ ಗದ್ಯ ಸಂಸ್ಕøತ ಹಾಗೂ ಪ್ರಾಕೃತದಲ್ಲಿದೆ. ಗೀತೆಗಳು ಮೈಥಿಲಿಯಲ್ಲಿವೆ. ಇದು ಗೋರಕ್ಷನಾಥ ಮತ್ತು ಮತ್ಸ್ಯೇಂದ್ರನಾಥರ ಕಥೆ. ಪದಾವಳಿ-ಈತ ತನ್ನ ಬಾಲ್ಯದಿಂದ ಹಿಡಿದು ಮುಪ್ಪಿನತನಕ    ವಿವಿಧ ಪ್ರಸಂಗಗಳಲ್ಲಿ ಬರೆದ ಗೇಯ ಪದಗಳ ಸಂಗ್ರಹ. ಈ ಗೇಯ ಪದಗಳು ಇವನ ಕೀರ್ತಿಯನ್ನು ಹೆಚ್ಚಿಸಿವೆ. ಇವು ದಾಸರ ಪದಗಳಂತೆ ರಾಗತಾಳಬದ್ಧವಾಗಿವೆ. ಇವನ ಸಮಸ್ತ ಕಾರಯಿತ್ರೀ ಪ್ರತಿಭೆ ಮತ್ತು ಕಾವ್ಯವೈಭವ ಈ ಕೀರ್ತನೆಗಳಲ್ಲಿ ಚೆಲ್ಲುವರಿದಿದೆ. ಈತನ ಪದಗಳನ್ನು ಶೃಂಗಾರ ಪದಗಳು, ಭಕ್ತಿಪದಗಳು ಮತ್ತು ವಿವಿಧ ಪದಗಳು-ಹೀಗೆ ಮೂರು ಗುಂಪುಗಳಾಗಿ ವಿಂಗಡಿಸಬಹುದು.    

	ಈತ ಸೌಂದರ್ಯಾರಾಧಕ, ಪ್ರಕೃತಿ ಉಪಾಸಕ. ವಸಂತ ಋತುವಿನ ಮೋಹಕತೆ, ಮಳೆಗಾಲದ ಭೀಕರತೆ ಇವನ್ನು ಮನಮುಟ್ಟುವಂತೆ ಬಣ್ಣಿಸಿದ್ದಾನೆ. ಇವನ ಭಾಷೆ ಲಲಿತ ಹಾಗೂ ಮಾಧುರ್ಯ ಉಳ್ಳದ್ದು. ಪದಗಳ ಆಯ್ಕೆಯಲ್ಲಿ ಪರಿಣತ. ಮಿತವಾದ ಶಬ್ದಗಳಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವುದರಲ್ಲಿ ನಿಷ್ಣಾತ.

	ಈತ ಭಕ್ತ ಹಾಗೂ ಶೃಂಗಾರ ಕವಿ. ರಾಧಾಕೃಷ್ಣರ ಪ್ರೇಮ, ಭಕ್ತಿ ನಿರೂಪಣೆ ಇವನ ಗೀತೆಗಳ ಪ್ರಧಾನ ಅಂಶ. ಜಯದೇವನ ಗೀತಗೋವಿಂದವನ್ನು ಅನುಸರಿಸಿದ್ದಾನೆ. ಭಕ್ತಿಯ ಜೊತೆಜೊತೆಗೇ ಶೃಂಗಾರವನ್ನೂ ತಂದಿದ್ದಾನೆ. 

	ಈತ ಚಿತ್ರಿಸಿದ ರಾಧೆ ಇತರ ಕಡೆಗಳಲ್ಲಿರುವಂತೆ ಕೃಷ್ಣನಿಗಿಂತ ದೊಡ್ಡವಳಲ್ಲ; ಚಿಕ್ಕವಳು. ಕೃಷ್ಣನ ಪ್ರೇಮಧಾರೆಯಲ್ಲಿ ಮಿಂದ ರಾಧೆಗೆ ಆತ ಮಧುರೆಗೆ ಹೋದಾಗ ವಿರಹತಾಪ ತಡೆಯುವುದು ಕಷ್ಟವಾಗುತ್ತದೆ. ಇತ್ತ ಕೃಷ್ಣನೂ ರಾಧೆಯನ್ನು ಅಗಲಿರಲಾರ. ಈ ಚಿತ್ರ ವಾಸ್ತವವಾಗಿ, ಸುಂದರವಾಗಿ, ಮನೋಜ್ಞವಾಗಿ ಮೂಡಿಬಂದಿದೆ. ಈತನ ಭಕ್ತಿ-ಶೃಂಗಾರದ ಪರಿ ಬಂಗಾಲಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಹಿಂದು ಧರ್ಮದ ಸೂರ್ಯ ಮುಳುಗಿ ಹೋಗಬಹುದು; ಕೃಷ್ಣನಲ್ಲಿ ಶ್ರದ್ಧೆ ಅಳಿಯಬಹುದು; ಕೃಷ್ಣನ ಸ್ತುತಿಗಳು ಕಣ್ಮರೆಯಾಗಬಹುದು; ಆದರೆ ರಾಧಾಕೃಷ್ಣರ ಲೀಲಾಗಾನವಿರುವ ವಿದ್ಯಾಪತಿಯ ಪದಗಳು ಎಂದಿಗೂ ಅಳಿಯವು ಎಂದು ಈತನ ಕಾವ್ಯದ ಬಗ್ಗೆ ವಿದ್ಯಾಪತಿ ಅಂಡ್ ಹಿಸ್ ಕಂಟೆಂಪೊರರೀಸ್ ಕೃತಿಯಲ್ಲಿ ಗ್ರಿಯರ್ಸನ್ ಹೇಳಿದ್ದಾನೆ.  
		
   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

		 (ವಿ.ಡಿ.ಎಚ್.)